Sample Article
ಬೆಟ್ಟ, ಬಂಡೆ ಮತ್ತು ಬದುಕು
ಡಾ. ಎಸ್.ಎಂ. ಶಶಿಧರ್
ಗ್ರೀಕ್ ಪುರಾಣಗಳಲ್ಲಿ ಸಿಸಿಫಸ್ ಎನ್ನುವವನು ಅತ್ಯಂತ ಚಾಣಾಕ್ಷ ಮತ್ತು ಬುದ್ಧಿವಂತ ರಾಜ. ಇವನು 'ಕೋರಿಂತ್' ಎನ್ನುವ ನಗರವನ್ನು ಕಟ್ಟಿದವನು. ಆದರೆ ಇವನ ಬುದ್ಧಿವಂತಿಕೆ ಹೆಚ್ಚಾಗಿ ದೇವತೆಗಳನ್ನೇ ಯಾಮಾರಿಸಲು ಬಳಕೆಯಾಗುತ್ತಿತ್ತು. ಸಿಸಿಫಸ್ನ ಕತೆ ಕೇವಲ ಒಂದು ಶಿಕ್ಷೆಯ ಕತೆಯಲ್ಲ, ಅದು ಮನುಷ್ಯನ ಹಠ ಮತ್ತು ದೇವತೆಗಳ ಅಹಂಕಾರದ ನಡುವಿನ ಸಂಘರ್ಷ.
ಒಮ್ಮೆ ಸಿಸಿಫಸ್ ಸಾಕ್ಷಾತ್ ಜ್ಯೂಸ್ ದೇವನ ಗುಟ್ಟೊಂದನ್ನು ರಟ್ಟು ಮಾಡುತ್ತಾನೆ. ಇದರಿಂದ ಕೋಪಗೊಂಡ ಜ್ಯೂಸ್, ಸಿಸಿಫಸ್ನ ಪ್ರಾಣ ತೆಗೆಯಲು ಸಾವಿನ ದೇವತೆ 'ಥಾನಾಟೋಸ್'ನನ್ನು ಕಳುಹಿಸುತ್ತಾನೆ. ಆದರೆ ಸಿಸಿಫಸ್ ಸಾಮಾನ್ಯದವನಲ್ಲ. ತನ್ನ ಮನೆಗೆ ಬಂದ ಸಾವಿನ ದೇವತೆಯನ್ನು ಕಂಡು ಹೆದರುವ ಬದಲು, ಅವನಿಗೆ ಉಪಚಾರ ಮಾಡುವಂತೆ ನಟಿಸಿ, ಮಾತುಗಳಲ್ಲಿ ಮರುಳು ಮಾಡುತ್ತಾನೆ. "ನೋಡು ಥಾನಾಟೋಸ್, ಈ ಸರಪಳಿ ಹೇಗೆ ಕೆಲಸ ಮಾಡುತ್ತದೆ ಎಂದು ತೋರಿಸು" ಎಂದು ಹೇಳಿ, ಸಾಕ್ಷಾತ್ ಸಾವಿನ ದೇವತೆಗೇ ಬೇಡಿ ಹಾಕಿ ಮನೆಯ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕುತ್ತಾನೆ!
ಇದರ ಪರಿಣಾಮ ಏನಾಯಿತು ಎಂದರೆ, ಜಗತ್ತಿನಲ್ಲಿ ಜನರು ಸಾಯುವುದೇ ನಿಂತುಹೋಯಿತು. ಯುದ್ಧದಲ್ಲಿ ತಲೆ ಕಡಿದರೂ ಸೈನಿಕರು ಮತ್ತೆ ಎದ್ದು ಬರುತ್ತಿದ್ದರು, ರೋಗಿಗಳು ಸಾಯದೆ ನರಳುತ್ತಿದ್ದರು. ಕೊನೆಗೆ ಯುದ್ಧದ ದೇವತೆ ಏರಿಸ್ ಬಂದು ಥಾನಾಟೋಸ್ನನ್ನು ಬಿಡಿಸಿ, ಸಿಸಿಫಸ್ನನ್ನು ಸಾಯಿಸಿ ನರಕಕ್ಕೆ ಎಳೆದೊಯ್ಯುತ್ತಾನೆ.
ಸಿಸಿಫಸ್ ಸಾಯುವ ಮುನ್ನ ತನ್ನ ಹೆಂಡತಿಗೆ ಒಂದು ಮಾತು ಹೇಳಿರುತ್ತಾನೆ: "ನಾನು ಸತ್ತ ಮೇಲೆ ನನ್ನ ದೇಹಕ್ಕೆ ಯಾವುದೇ ಅಂತಿಮ ಸಂಸ್ಕಾರ ಮಾಡಬೇಡ, ಶವವನ್ನು ಬೀದಿಯಲ್ಲಿ ಎಸೆದುಬಿಡು."
ನರಕಕ್ಕೆ ಹೋದ ಸಿಸಿಫಸ್ ಅಲ್ಲಿನ ದೇವತೆಗಳ ಮುಂದೆ ಅಳಲು ಶುರುಮಾಡುತ್ತಾನೆ. "ನೋಡಿ, ನನ್ನ ಹೆಂಡತಿ ಎಷ್ಟು ಕೆಟ್ಟವಳು, ನನಗೆ ಗೌರವಯುತವಾಗಿ ಅಂತ್ಯಸಂಸ್ಕಾರ ಕೂಡ ಮಾಡಿಲ್ಲ. ನಾನು ವಾಪಸ್ ಭೂಮಿಗೆ ಹೋಗಿ ಅವಳಿಗೆ ಬುದ್ಧಿ ಕಲಿಸಿ, ಸಂಸ್ಕಾರ ಮಾಡಿಸಿಕೊಂಡು ಮೂರೇ ದಿನದಲ್ಲಿ ವಾಪಸ್ ಬರುತ್ತೇನೆ" ಎಂದು ಪರ್ಸೆಫೋನಿ ದೇವತೆಯನ್ನು ನಂಬಿಸುತ್ತಾನೆ.
ಸಾವಿನಿಂದ ಪಾರಾಗಿ ಮತ್ತೆ ಭೂಮಿಗೆ ಬಂದ ಸಿಸಿಫಸ್, ಆಮೇಲೆ ವಾಪಸ್ ಹೋಗಲೇ ಇಲ್ಲ! ಎಷ್ಟೋ ವರ್ಷಗಳ ಕಾಲ ಭೂಮಿಯ ಮೇಲಿನ ಗಾಳಿ, ಮಳೆ, ಬಿಸಿಲನ್ನು ಸವಿಯುತ್ತಾ ಸುಖವಾಗಿ ಬದುಕುತ್ತಾನೆ. ಕೊನೆಗೆ ದೇವತೆಗಳ ತಾಳ್ಮೆ ಕೆಡುತ್ತದೆ. ಅವರು ಬಲವಂತವಾಗಿ ಸಿಸಿಫಸ್ನನ್ನು ಭೂಮಿಯಿಂದ ಎತ್ತಿಕೊಂಡು ಹೋಗಿ ನರಕಕ್ಕೆ ಎಸೆಯುತ್ತಾರೆ. ಅಲ್ಲಿ ಅವನಿಗೆ ಒಂದು ವಿಚಿತ್ರವಾದ ಶಿಕ್ಷೆ ವಿಧಿಸಲಾಗುತ್ತದೆ.
ಒಂದು ಬೃಹತ್ ಬಂಡೆಯನ್ನು ಬೆಟ್ಟದ ತುದಿಗೆ ತಳ್ಳುವುದು ಸಿಸಿಫಸ್ನ ಕೆಲಸ. ಆ ಬೆಟ್ಟದ ಏರಿ ಬಹಳ ಕಡಿದಾಗಿರುತ್ತದೆ. ಸಿಸಿಫಸ್ ತನ್ನ ಇಡೀ ದೇಹದ ಶಕ್ತಿಯನ್ನು ಧಾರೆ ಎರೆದು, ಬೆವರುತ್ತಾ, ಏದುಸಿರು ಬಿಡುತ್ತಾ ಆ ಕಲ್ಲನ್ನು ತುದಿಯವರೆಗೂ ತಳ್ಳುತ್ತಾನೆ. ಇನ್ನೇನು ಕಲ್ಲು ತುದಿಯಲ್ಲಿ ನಿಂತಿತು ಎನ್ನುವ ಕ್ಷಣದಲ್ಲಿ, ಆ ಬಂಡೆ ತನ್ನ ಭಾರಕ್ಕೆ ತಾನೇ ಹಿಂದಕ್ಕೆ ಉರುಳಿ ಬೆಟ್ಟದ ಬುಡಕ್ಕೆ ಬಂದು ಬೀಳುತ್ತದೆ.
ಸಿಸಿಫಸ್ ಮತ್ತೆ ಬೆಟ್ಟ ಇಳಿದು ಹೋಗಬೇಕು, ಮತ್ತೆ ಆ ಕಲ್ಲನ್ನು ತಳ್ಳಬೇಕು. ಇದು ಯುಗ ಯುಗಾಂತರಗಳಿಂದ ನಡೆಯುತ್ತಲೇ ಇದೆಯಂತೆ! ಇದು ಎಂದಿಗೂ ಮುಗಿಯದ, ಯಾವುದೇ ಫಲಿತಾಂಶವಿಲ್ಲದ ನಿರರ್ಥಕ ಕೆಲಸ, ಅಲ್ವೇ!
ನೋಡಲು ಹೋದರೆ ಸಿಸಿಫಸ್ ಕೇವಲ ಪುರಾಣದ ಕತೆಯಲ್ಲ; ಅವನು ಕೇವಲ ಗ್ರೀಸ್ ದೇಶದವನಲ್ಲ. ಅವನು ನಮ್ಮ ಪಕ್ಕದ ಮನೆಯವನು. ಬೆಳಗ್ಗೆ ಎದ್ದು ಗಿಡಕ್ಕೆ ನೀರು ಹಾಕುವ ತಂದೆ, ಪ್ರತಿದಿನ ಕಸ ಗುಡಿಸುವ ಪೌರಕಾರ್ಮಿಕ, ರಾತ್ರಿವರೆಗೆ ಫೈಲು ತಳ್ಳುವ ಗುಮಾಸ್ತ—ನಾವೆಲ್ಲರೂ ಒಂದು ರೀತಿಯಲ್ಲಿ ಸಿಸಿಫಸ್ಸರೇ.
ವ್ಯತ್ಯಾಸ ಇಷ್ಟೇ: ಯಾರು ಬಂಡೆಯನ್ನು ಶಪಿಸುತ್ತಾ ತಳ್ಳುತ್ತಾರೋ ಅವರಿಗೆ ಬದುಕು ನರಕ. ಯಾರು ಆ ಕಲ್ಲಿನ ಘರ್ಷಣೆಯ ಸದ್ದಿನಲ್ಲೂ ಒಂದು ಸಂಗೀತವನ್ನು ಕೇಳುತ್ತಾರೋ ಅವರಿಗೆ ಆ ಬೆಟ್ಟವೇ ಕೈಲಾಸ.
ಬದುಕು ಅಂದ್ರೆ ಅದೇನು ಒಂದು ಗಣಿತದ ಪುಸ್ತಕವಲ್ಲ, ಎರಡು ಎರಡು ಸೇರಿ ನಾಲ್ಕೇ ಆಗಬೇಕು ಅಂತ ಹಠ ಹಿಡಿಯಲು. ಗಣಿತಕ್ಕೆ ಲಾಜಿಕ್ ಇರುತ್ತೆ, ಆದರೆ ಕವಿತೆಗೆ ಆದರ ಹಂಗಿಲ್ಲ. ಜೀವನ ಕೂಡ ಒಂದು ಸುಂದರವಾದ ಕವಿತೆಯಾಗುವುದು ಅದಕ್ಕೆ ಯಾವುದೇ 'ಪರ್ಪಸ್' ಇಲ್ಲದಿದ್ದಾಗಲೇ. ನಾವು ಸದಾ "ನನ್ನ ಲೈಫ್ನ ಉದ್ದೇಶ ಏನು?" ಅಂತ ತಲೆ ಕೆಡಿಸಿಕೊಳ್ಳುತ್ತಾ, ಇರುವ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಆದರೆ ಓಶೋ ನಗುತ್ತಾ ಒಂದು ಮಾತು ಹೇಳ್ತಾರೆ—ಜೀವನಕ್ಕೆ ಯಾವುದೇ ಉದ್ದೇಶವಿಲ್ಲ, ಅದೊಂದು 'ಲೀಲೆ' ಅಷ್ಟೆ. ಬೆಟ್ಟದ ತುದಿಯಲ್ಲಿ ಯಾರಿಗೂ ಕಾಣದಂತೆ ಅರಳುವ ಕಾಡು ಹೂವಿಗೆ ಯಾರೋ ಬಂದು ಮೆಚ್ಚಬೇಕು ಅನ್ನೋ ಹಂಬಲ ಇರೋದಿಲ್ಲ. ಅದು ಅರಳುವುದು ಅದರ ಸ್ವಭಾವ. ಹಾಗೆಯೇ, ಈ ಬದುಕಿನ ಬಂಡೆಯನ್ನು ತಳ್ಳುವುದು ನಮ್ಮ ಸ್ವಭಾವವಾಗಿ ಬದಲಾದಾಗ, ಅಲ್ಲಿ ಒಂದು ರೀತಿಯ ಸಹಜತೆ ಇರುತ್ತದೆ.
ನಮ್ಮ ದೈನಂದಿನ ಬದುಕು ಇದೆಯಲ್ಲ, ಅದೊಂದು ಚಕ್ರದಂತೆ. ಬೆಳಗ್ಗೆ ಎದ್ದರೆ ಆಫೀಸು, ರಾತ್ರಿಯಾದರೆ ನಿದ್ದೆ. ಈ ಪುನರಾವರ್ತನೆಯಲ್ಲಿ ನಮಗೆ ದೊಡ್ಡ ಅರ್ಥಗಳೇನೂ ಕಾಣಿಸದೇ ಇರಬಹುದು. ಆದರೆ ಅಲ್ಬರ್ಟ್ ಕಾಮೂ ಹೇಳುವಂತೆ, ಈ 'ಅಸಂಗತತೆ'ಯನ್ನೇ ಸಂಭ್ರಮಿಸುವುದಿದೆಯಲ್ಲ, ಅದೇ ಮನುಷ್ಯ ಸಾಧಿಸಬಹುದಾದ ನಿಜವಾದ ವಿಜಯ. ಸಿಸಿಫಸ್ ಎಂಬ ಆ ಪುರಾಣದ ಕಥಾನಾಯಕನಿಗೆ ಆ ಬಂಡೆ ಎಂದಿಗೂ ಬೆಟ್ಟದ ತುದಿಯಲ್ಲಿ ನಿಲ್ಲಲ್ಲ ಅಂತ ಚೆನ್ನಾಗಿ ಗೊತ್ತು. ಆದರೂ ಅವನು ಪ್ರತಿ ಬಾರಿಯೂ ಹಠ ಬಿಡದೆ ಆ ಕಲ್ಲನ್ನು ತಳ್ಳುತ್ತಾನಲ್ಲ, ಆ ಹಠವೇ ಅವನ ಅಸ್ತಿತ್ವಕ್ಕೊಂದು ರಾಜಗಾಂಭೀರ್ಯವನ್ನು ತಂದುಕೊಡುತ್ತದೆ.
ನಾವೆಲ್ಲರೂ ಯಾವುದೋ ಒಂದು ದೊಡ್ಡ 'ಸಕ್ಸಸ್' ಸಿಕ್ಕರೆ ಲೈಫ್ ಸೆಟಲ್ ಆಗುತ್ತೆ, ಆಮೇಲೆ ಆರಾಮವಾಗಿ ಇರಬಹುದು ಅಂತ ಸದಾ ಭ್ರಮಿಸ್ತೀವಿ. ಬೆಟ್ಟದ ತುದಿಯಲ್ಲೇ ಸುಖ ಇರೋದು ಅಂತ ನಂಬಿ, ದಾರಿಯಲ್ಲಿ ಸಿಗೋ ಮಜವನ್ನೆಲ್ಲಾ ಮಿಸ್ ಮಾಡ್ಕೊಳ್ತೀವಿ. ಆದ್ರೆ ಸಿಸಿಫಸ್ ನಮಗೆ ಕಲಿಸೋ ಸೀಕ್ರೆಟ್ ಬೇರೆಯೇ ಇದೆ—ಬದುಕು ಇರೋದು ಫಿನಿಶಿಂಗ್ ಲೈನ್ನಲ್ಲಿ ಅಲ್ಲ, ಆ ಕಲ್ಲನ್ನು ತಳ್ಳೋ 'ಪ್ರೊಸೆಸ್'ನಲ್ಲಿ ಮಾತ್ರ. ಕೆಲಸ ಮಾಡೋವಾಗ ಹರಿಯೋ ಆ ಬೆವರಿನ ಹನಿ, ಆ ಏದುಸಿರು, ಆ ಸ್ನಾಯುಗಳ ಬಿಗಿತ... ಇದೇ ಅಲ್ವಾ ಲೈಫ್ ಅಂದ್ರೆ? ಯಾವಾಗ ನಮಗೆ ಪಯಣವೇ ಗುರಿಯಾಗಿಬಿಡುತ್ತೋ, ಆಗ ಬದುಕಿನ ಪ್ರತಿ ಕ್ಷಣವೂ ಒಂದು ಗ್ರ್ಯಾಂಡ್ ಸಂಭ್ರಮವಾಗಿ ಕಾಣೋಕೆ ಶುರು ಮಾಡುತ್ತೆ!
ಸಿಸಿಫಸ್ ನಗುನಗುತ್ತಾ ಬಂಡೆ ತಳ್ಳಿದ ಕ್ಷಣ, ದೇವತೆಗಳ ಶಿಕ್ಷೆಯೇ ಸೋತು ಹೋಗುತ್ತದೆ.
******